ಕೋನಮಾಪಕ
ಕೋನಗಳನ್ನು ಅಳೆಯಲು ಬಳಸುವ ಸಾಧನ.  ಹರಳುಗಳ ಕೋನಗಳನ್ನು ಅಳೆಯಲು ಗೋನಿಯೋಮೀಟರ್ ಎಂಬ ಹೆಸರಿನ ಕೋನಮಾಪಕವನ್ನು ಜ್ಯಾಮಿತಿಯಲ್ಲಿ ಕೋನಗಳನ್ನು ಅಳೆಯಲು ಪ್ರೊಟ್ರ್ಯಾಕ್ಟರ್ ಎಂಬ ಹೆಸರಿನ ಕೋನಾನಮಾಪಕವನ್ನೂ ಬಳಸುತ್ತಾರೆ.  ಪ್ರಸ್ತುತ ಲೇಖನ ಗೋನಿಯೋಮೀಟರನ್ನು ಕುರಿತು ಇದೆ.  ಹರಳಿನ ಅಕ್ಕಪಕ್ಕದ ಮುಖಗಳ ನಡುವೆ ಇರುವ ಕೋನವೇ ಅಂತರ್ಮುಖ ಕೋನ.  ಒಂದು ಖನಿಜದ ಹರಳುಗಳು ಗಾತ್ರದಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನು ತೋರಿಸಿದರೂ ಅವುಗಳ ಅಂತರ್ಮುಖ ಕೋನಗಳ ಮೌಲ್ಯ ಏಕರೂಪವಾಗಿರುತ್ತದೆ.  ಇದನ್ನು ಅಳೆಯುವ ಸಾಧನವೇ ಕೋನಮಾಪಕ.  ಇದರಲ್ಲಿ ಎರಡು ವಿಧ:  1 ಸಂಸ್ಪರ್ಶ ಕೋನಮಾಪಕ, 2 ಪ್ರತಿಫಲನ ಕೋನಮಾಪಕ.

ಸಂಸ್ಪರ್ಶ ಕೋನಮಾಪಕವನ್ನು ರಚಿಸಿದವ ಪೆನ್‍ಫೀಲ್ಡ್.  ಇದಕ್ಕೂ ಖನಿಜದ ಮುಖಗಳಿಗೂ ನಿಕಟವಾದ ಸ್ಪರ್ಶವಿರುತ್ತದೆ  ದಪ್ಪವಾದ ರಟ್ಟಿನ ಅರ್ಧ ವೃತ್ತಾಕಾರದ ಕೋನ ಮಾಪಕವನ್ನು ಗುರುತಿಸಲಾಗಿದೆ.  ಅದನ್ನು 00-1800 ವರೆಗೆ ವಿಭಜಿಸಲಾಗಿದೆ.  ತಳದ ಮಧ್ಯಭಾಗದಲ್ಲಿ ಸುಲಭವಾಗಿ ಅತ್ತಿಂದಿತ್ತ ಚಲಿಸುವ ನೀಳಪಟ್ಟಿಯೊಂದನ್ನು ಲಗತ್ತಿಸಲಾಗಿದೆ.  ಹರಳಿನ ಅಕ್ಕ ಪಕ್ಕದ ಮುಖಗಳನ್ನು ಕೋನಮಾಪಕದ ತಳ ಮತ್ತು ನೀಳಪಟ್ಟಿಯ ನಡುವೆ ಇಟ್ಟಲ್ಲಿ ಅವುಗಳ ನಡುವಿನ ಕೋನದ ಮೌಲ್ಯವನ್ನು ಸುಲಭವಾಗಿ ಅಳೆಯಬಹುದು.  ಮೌಲ್ಯವನ್ನು ಅನುಸರಿಸಿ ನೀಳಪಟ್ಟಿ ಉಪಕರಣದಲ್ಲಿ ಗುರುತಿಸಿರುವ ಡಿಗ್ರಿಯನ್ನು ಸೂಚಿಸುತ್ತದೆ.  ಹರಳು ಗಾತ್ರದಲ್ಲಿ ದೊಡ್ಡದಾಗಿದ್ದಲ್ಲಿ ಈ ಉಪಕರಣವನ್ನು ಸುಲಭವಾಗಿ ಬಳಸಬಹುದು.  ಆದರೆ ಸೂಕ್ಷ್ಮ ಹರಳುಗಳ ಅಂತರ್ಮುಖ ಕೋನಗಳನ್ನು ಅಳೆಯಲು ಇದು ಅಷ್ಟಾಗಿ ಉಪಯೋಗಕ್ಕೆ ಬಾರದು.  ಆಗ ಪ್ರತಿಫಲನ ಕೋನಮಾಪಕ ಬಹು ಉಪಯುಕ್ತವದುದು.  ಇದನ್ನು ವೊಲಾಸ್ಟನ್ ಎಂಬಾತ ನಿರ್ಮಿಸಿದ (1909).  ಖನಿಜದ ಹರಳಿನ ಮುಖಗಳು ನಯವಾಗಿದ್ದು ಉತ್ತಮ ಹೊಳಪಿನಿಂದಲೂ ಕೂಡಿದ್ದಲ್ಲಿ ಬಹಳ ಒಳ್ಳೆಯದು.  ಅಕ್ಕಪಕ್ಕದ ಮುಖಗಳಿಂದ ಹೊರಹೊಮ್ಮುವ ಬೆಳಕಿನ ಪ್ರತಿಫಲನವನ್ನು ಉಪಯೋಗಿಸಿಕೊಂಡು ಅಂತರ್ಮುಖ ಕೋನವನ್ನು ನಿರ್ಧರಿಸಲಾಗುವುದು.  ಹರಳುಗಳಿಂದ ಎಕ್ಸ್‍ಕಿರಣ ಪ್ರತಿಫಲಗಳನ್ನು ಅಳೆಯುವ ವೈಸೆನ್‍ಬರ್ಗ್ ಎಕ್ಸ್‍ಕಿರಣ ಕೋನಮಾಪಕ ಎಂಬ ಒಂದು ಸಾಧನವೂ ಬಳಕೆಯಲ್ಲಿ ಉಂಟು.       
  (ಎಂ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ